ಮಂಗಳವಾರ, ಜನವರಿ 27, 2009

ಮುಂಜಾನೆಯಿಂದ ಸಂಜೆಯವರೆಗೆ...

ಇದು ನಾಲ್ಕು ಸಾಲುಗಳ ಕವನ. ಪ್ರತಿ ಸಾಲಿನಲ್ಲಿ ಎರಡನೇ ಅಕ್ಷರ ಒಂದೇ ಆಗಿರುತ್ತದೆ. ಬಾಳಿನ ಮುಂಜಾನೆ ಮತ್ತು ಸಂಜೆಯನ್ನು ಸೂಚಿಸುವ ಪ್ರಯತ್ನವನ್ನು ಮಾಡಿರುತ್ತೇನೆ. ನಿಮ್ಮ ಅನಿಸಿಕೆ ಅಭಿಪ್ರಾಯಕ್ಕೆ ಕಾದಿದ್ದೇನೆ.

೧||
ರಂಜಿಸಿತು ಮೂಡಲು ರಕ್ತವರ್ಣದಲಿ
ಅಂಜಿದವು ನಕ್ಷತ್ರ ರಾಶಿ ಬಾನಿನಲಿ
ಪಂಜಿನಂದದಿ ಭಾಸ್ಕರ ಮೇಲೇರೆ
ಮಂಜಿನಲಿ ಮುಸುಕಿಹ ಧರಣಿಯ ಮೈದೋರೆ

೨||
ಅಂದಿನಾ ಕರ್ಮಕ್ಕೆ ತಲೆಬಾಗಿ ನಿಂದು
ವಂದನೆಯನರ್ಪಿಸಿದ ಬ್ರಾಹ್ಮಣ ಮಿಂದು
ಕಂದೀಲನುರಿಸಿದ ಪಾದ್ರಿ ಚರ್ಚಿನೊಳು
ಎಂದನಾ ಮಹಮದೀಯ ಆಲ್ಲಾಹೊ ಅಕ್ಬರ್

೩||
ರವಿ ಮೆಲ್ಲ ಮೆಲ್ಲ ಮೇಲೆರುತಿದ್ದ ಸುಡುತೆ
ಕವಿ ಕುಳಿತಿರ್ದ ಮರದಡಿ ಈಕ್ಷಿಸುತೆ
ಕಾವಿಯುಟ್ಟ ಸನ್ಯಾಸಿ ತಿರುಗುತಲಿದ್ದ ಬೀದಿಯಲಿ
ಆವರಿಸಿತು ಮಾಯೆ ಜಗದ ಜನರಲಿ

೪||
ಕತ್ತೆತ್ತಿ ನೋಡೆ ಕಂಡಿತು ಕಲ್ಯಾಣ ನಗರಿ
ಎತ್ತೆತ್ತ ನೋಡಿದರು ತೋಟಗಳ ವೈಖರಿ
ಹೊತ್ತಿದ್ದವು ರೈಲುಬಂಡಿ ಮೋಟರು ಜನರ
ಎತ್ತಲೋ ಒಯ್ಯುವ ಅರ್ಥವಿಲ್ಲದ ಸಡಗರ

೫||
ತೆರೆದರು ವರ್ತಕರು ಮುಚ್ಚಿದಂಗಡಿಗಳ
ನೆರೆದರು ಜನರು ಮುಂದಿಟ್ಟಡಿಗಳ
ಆರಂಭಿಸಿತು ಜಗ ತನ್ನ ಇಹಲೋಕ ವ್ಯಾಪಾರ
ಮರೆತು ಸಂಪೂರ್ಣ ಪರಲೋಕ ವಿಚಾರ

೬||
ಓಡುತಲಿತ್ತು ಕಾಲ ನೋಡಲು ಸಾಯಂಕಾಲ
ಮಾಡುತಲಿತ್ತು ಜಗ ತನ್ನ ಕರ್ಮದ ಪಾಲ
ನೋಡುತಲಿದ್ದನು ಕಾಲನು ಕಾಲವ ತನ್ನೊಳು
ಬಾಡುತಲಿದ್ದ ಮನುಜನ ತನ್ನೆಡೆಗಳೆಯಲು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ