ಶುಕ್ರವಾರ, ಏಪ್ರಿಲ್ 3, 2009

ಚುನಾವಣಾ ಲಾವಣಿ

ಬಂತಪ್ಪ ಬಂತು ಚುನಾವಣೆ ಬಂತು ಎದ್ದೇಳಿ
ಓದಿರಿ ಪೇಪರ್ ನೋಡಿರಿ ಟೀವಿ ಬೆಳಗಾಗೇಳುತಲಿ |ತಮಟೆ|

ಬರುವರು ಮನೆಗೆ ಹಲ್ ಹಲ್ ಕಿರಿಯುತ ಕೈ ಮುಗಿದು
ಕೊಡುವರು ಭರವಸೆ ಪುಕ್ಕಟೆ ಟೀವಿ ಮನೆಗೊ೦ದು |ತಮಟೆ|

ಬಿಗಿವರು ಭಾಷಣ ಹಿ೦ದು ಮುಸ್ಲಿಂ ಎಲ್ಲರು ಒಂದು
ಲೆಕ್ಕ ಹಾಕುವರು ಜಾತಿವಾರು ಮತಗಲೆಷ್ಟೆ೦ದು |ತಮಟೆ|

ಹರಿವುದು ಹೆ೦ಡ ನೂರರ ನೋಟು ತಲೆಗಿಷ್ಟು
ಹ೦ಚುವರು ಮೂಗುತಿ ಸೀರೆಯ ನಡುರಾತ್ರಿಯಲಿ. |ತಮಟೆ|

ಓಡಾಡಿತು ಓಟರಪಟ್ಟಿ ಊರೊಳಗೆ
ನುಸುಳಿತು ಬಾಟಲಿ ಸ್ಲಮ್ಮೊಳಗೆ |ತಮಟೆ|

ಕಿರುಚಿತು ಯುವಜನ ಪ್ರಚಾರದಲಿ
ಅರಿಚಿತು ಲೌಡ್ಸ್ಪೀಕರ್ ಕರ್ಕಶದಿ |ತಮಟೆ|

ಸುತ್ತಿಬ೦ದರು ನಾಯಕರು ಕ್ಷೆತ್ರದಲಿ
ಸುಸ್ತಾದರು ಮತದಾರರ ಹುಡುಕುತಲಿ

ನಡೆಯಿತು ನಡುರಾತ್ರಿವರೆ ಓಡಾಟ
ಜರುಗಿತು ಗೌಡ್ರ ತೋಟದಲಿ ಬಾಡೂಟ |ತಮಟೆ|

ಪತ್ರಿಕೆ ಪೂರಾ ಜಾಹೀರಾತು
ಬಿತ್ತಲು ಪಕ್ಷಗಳ ಕರಾಮತು |ತಮಟೆ|

ಬಿದ್ದವು ಕಳ್ಳ ವೋಟುಗಳು ಮತಪೆಟ್ಟಿಗೆಗೆ
ಗೆದ್ದರು ಭ್ರಷ್ಟರು ನಡೆಯಿತು ಮೆರವಣಿಗೆ |ತಮಟೆ|

(ಎಂತಾ ದೇಶವಿದೆನಾಗೊಯ್ತು ಎಲ್ಲಿ ನೋಡಿದರು ಲ೦ಚಗಳೆ
ಅ೦ತರ೦ಗ ಬಹಿರ೦ಗವ ಶೋಧಿಸಿ ನೋಡಲೆಲ್ಲ ನವರ೦ಗಗಳೆ ಎನ್ನುವ ಲಾವಣಿಯ೦ತೆ ಹಾಡಿ )

ಗುರುವಾರ, ಮಾರ್ಚ್ 19, 2009

ಶವ ಸಂಸ್ಕಾರದಲ್ಲಿ ಮಿತವ್ಯಯ. ಭಾಗ ೩

ಸಾಧಾರಣವಾಗಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅ೦ತ್ಯಸಮ್ಸ್ಕಾರಕ್ಕೆ೦ದು ಬ್ಯಾಂಕಿನ ಖಾತೆಯೊಂದರಲ್ಲಿ ೮೦೦೦ ಡಾಲರುಗಳನ್ನು ಜಮ ಮಾಡುವ ಪದ್ದತಿ ಇಲ್ಲಿ ಬಳಕೆಯಲ್ಲಿದ್ದು, ಈಗ ಅದಕ್ಕೂ ಚ್ಯುತಿ ಬಂದಿದೆ. ಈಗಿನ ಆರ್ಥಿಕ ದುರವಸ್ಥೆಯಲ್ಲಿ ಕೆಲಸ ಕೆದುಕೊ೦ಡಾಗ ಈ ಹಣ ಸಹಾಯಕ್ಕೆ ಬರಬಹುದೆ೦ದೂ ಸಹ ಜನ ಯೋಚಿಸುವ೦ತಾಗಿದೆ.
ಇಲ್ಲಿನ ಜನ ಸ್ಮಶಾನಕ್ಕೆ ಆಗಾಗ್ಯೆ ಹೋಗಿ ತಮ್ಮ ರಕ್ತಸಂಬಂಧಿಗಳ ಸಮಾದಿಯ ದರ್ಶನ ಮಾಡುವು ಹವ್ಯಾಸವಿದ್ದು, ಈಗ ಅಂತಹ ಕಾರ್ಯಕ್ರಮವನ್ನು ಸಹ ತಳ್ಳಿ ಹಾಕುತಿದ್ದಾರೆ. ಮುಂಚಿನಂತೆ ಸ್ಮಶಾನದಲ್ಲಿ ಜಾಗವನ್ನು ಕಾದಿರಿಸುವ ಪದ್ದತಿಗೆ ತಿಲಾಂಜಲಿ ನೀಡಲಾಗುತ್ತಿದೆ. ಆರ್ಥಿಕ ಪರಿಸ್ಥಿತಿಯ ಒತ್ತಡ ವರ್ಜಿನಿಯಾದ ಅಬಿನ್ಗ್ದನ್ ಎಂಬಲ್ಲಿನ ಹಿಲ್ಲ್ಸ್ ಮೆಮೋರಿಯಲ್ ಪಾರ್ಕ್ನಲ್ಲಿ ಮರಣೋತ್ತರ ಸಂಸ್ಕಾರಕ್ಕೆ ಶೇಕಡ ೬೦ ರಷ್ಟು ಬೇಡಿಕೆ ಕುಗ್ಗಿದೆಯೆಂದು ಇಲ್ಲಿ ಹೇಳಲಾಗುತ್ತಿದೆ. ಶವ ಸಂಸ್ಕಾರ ನೆರವೇರಿಸುವ ಸಂಸ್ಥೆಯೊಂದು ಅ೦ತ್ಯಸಮ್ಸ್ಕಾರದಲ್ಲಿನ ಹಲವು ಸಂಪ್ರದಾಯಗಳನ್ನು ಪರಿಸ್ಥಿತಿಗನುಗುಣವಾಗಿ ಕೈ ಬಿಡಬೇಕಾಗಿ ಬರುವುದರಿಂದ ದೇವರಲ್ಲಿ ಕ್ಸಮೆಬೇಡಿ ಕಾರ್ಯ ಪ್ರವೃತ್ತರಗುತ್ತಿದ್ದಾರೆಂದು ಹೇಳಲಾಗುತ್ತಿದೆ.
ಒಟ್ಟಾರೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ನು ೧೫ ವರ್ಷಗಳಲ್ಲಿ , ಇಲ್ಲಿನ ಜನರು ಮರಣೋತ್ತರ ವಿಚಾರವಾಗಿ ಯಾವುದೇ ಯೋಜನಯನ್ನು ಜಾರಿಗೆ ತರದೇ ಸಾವನ್ನಪ್ಪಬಹುದು ಎಂಬ ಅಭಿಪ್ರಾಯವು ಸಹ ಮೂಡಿಬಂದಿದೆ.

ಬುಧವಾರ, ಮಾರ್ಚ್ 18, 2009

ಮಿತ ವ್ಯಯದ ಶವಸಂಸ್ಕಾರ ಭಾಗ ೨

ಈ ಖಾಸಗಿ ಅ೦ಡರ್ತೇಕಿ೦ಗ ಸಂಸ್ಥೆಗಳ ಕೆಲಸವೇನೆ೦ದರೆ, ಒಬ್ಬ ವ್ಯಕ್ತಿಯು ಮರಣ ಹೊ೦ದಿದಾಗ, ಆ ಜಾಗಕ್ಕೆ ಶವಪೆಟ್ಟಿಗೆಯನ್ನು ಒಯಿದು ಪೆಟ್ಟಿಗೆಯಲ್ಲಿ ಶವವನ್ನು ಅಡಗಿಸಿ ಅಲ್ಲಿ೦ದ ಅದನ್ನು ಸಂಬಂಧಪಟ್ಟ ಇಗರ್ಜಿಗೆ ಸಾಗಿಸುವುದು, ನ೦ತರದಲ್ಲಿ ಕೊನೆಯ ಹಂತದಲ್ಲಿ ಶವಪೆಟ್ಟಿಗೆಗೆ ಮೊಳೆ ಬಡಿಯುವುದು,ಮತ್ತು ಈ ಮೊದಲೇ ಸಿದ್ಧ ಪಡಿಸಿರುವ ಹೊನ್ಡದೊಳಕ್ಕೆ ಅದನ್ನು ಇಳಿಸುವುದು ಇತ್ಯಾದಿ
ಇವೆಲ್ಲಕ್ಕೂ ೭೫೦೦ ರಿಂದ ೮೦೦೦ ಡಾಲರುಗಳು ಖರ್ಚಾಗಲಿದ್ದು, ಈಗಿನ ಆರ್ಥಿಕ ಬಿಕ್ಕಟ್ಟು ,ಈ ಮೊತ್ತದ ಹಣವನ್ನು ಭರಿಸುವಲ್ಲಿ ಹಿಂದು ಮುಂದು ನೋಡುವಂತಾಗಿ, ವಿಧಿಯಿಲ್ಲದೆ ಮಿತವ್ಯಯದ ಹಾದಿಯನ್ನು ಹಿಡಿಯುವ೦ತಾಗಿದೆ. ಅದಕ್ಕೆ೦ದೆ ಕೆಲವು ಸಂಸ್ಥೆಗಳು ಅಂತ್ಯಕ್ರಿಯೆಯ ತಮ್ಮ ದರವನ್ನು ಇಳಿಸಿ ಜನರನ್ನು ಆಕರ್ಷಿಸ ಹೊರಟಿವೆ. ಅದೆಂದರೆ ಸಾಧಾರಣವಾದ ಮರದ ಪೆಟ್ಟಿಗೆಯ ತಯಾರಿಕೆ,ಶವವನ್ನು ಅಂತ್ಯ ವಿಧಿಗೆ ಚರ್ಚುಗಳಿಗೆ ಸಾಗಿಸುವಲ್ಲಿ ಕಡಿಮೆ ವಾಹನಗಳ ಬಳಕೆ ,ಇಗರ್ಜಿಯಿ೦ದ ಸ್ಮಶಾನಕ್ಕೆ ಮೃತರ ಬಂಧುಗಳಿಗೆ ಏರ್ಪಡಿಸಲಾಗುತ್ತಿದ್ದ ವಿಶೇಷ ವಾಹನ ಸೌಲಭ್ಯಗಳ ಕಡಿತ, ಮುಂತಾದುವುಗಲಾದರೆ ಮೃತರ ಸಂಬಂಧಿಗಳ ಮಿತವ್ಯದ ಪರಿ ಈ ರೀತಿ ಇದೆ. ಹಲವರು ಶವವನ್ನು ಹೂಳಲು ಜಾಗಕ್ಕೆ ಹಣ ನೀಡಲು ಸಾಧ್ಯವಾಗದೇ, ಸುಡುವ ಪದ್ದತಿಗೆ ಅನಿವಾರ್ಯವಾಗಿ ಒಳಪಡುತ್ತಿದ್ದಾರೆ. ಸುಡುವ ಪದ್ದತಿಗೆ ಇಗರ್ಜಿಗಳ ವಿರೋಧವಿದ್ದರೂ ಸಹ ಈಗಿನ ಪರಿಸ್ಥಿತಿಗನುಗುಣವಾಗಿ ಅಂತಿಮ ಸನ್ಸ್ಕಾರಕ್ಕೆ ನಿರ್ದೇಶಕರು ಈ ಪದ್ದತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಬಂಧುಗಳ ದರ್ಶನಕ್ಕಾಗಿ ಶವಗಳನ್ನು ಹಲವಾರು ದಿನ ಕಾಪಾಡುವಲ್ಲಿ ಬಳಸಲಾಗುತ್ತಿದ್ದ ರಾಸಾಯನಿಕ ಸಂಸ್ಕರಣ ಪದ್ದತಿಗೂ ತಿಲಾಂಜಲಿ ನೀಡಲಿದ್ದಾರೆ. ( ಇದನ್ನು ಎಂಬಾಲ್ಮಿಂಗ್ ಎಂದು ಕರೆಯುತ್ತಾರೆ)ಚರ್ಚುಗಳಿಂದ ಬಂಧುಗಳು ಸ್ನೇಹಿತರು ತಮ್ಮ ಸ್ವಂತ ಖರ್ಚಿನಲ್ಲಿ ಸ್ಮಾಶನಕ್ಕೆ ಬರುವಂತಾಗಿದೆ. ಕಾರಣ ಈ ಪ್ರತ್ಯೇಕವಾದ ವಾಹನಗಳ ಖರ್ಚು ಕಡಿಮೆ ಮಾಡುವಲ್ಲಿ ಈ ಪ್ರಯತ್ನ.

ಬುಧವಾರ, ಜನವರಿ 28, 2009

ಅಮೆರಿಕ ಅಧ್ಯಕ್ಷ ಒಬಾಮ ಔದಾರ್ಯ

ಇತ್ತೀಚಿಗೆ ಅಮೆರಿಕೆಯ ಅಧ್ಯಕ್ಷರಾಗಿ ನೇಮಕಗೊಂಡ ಒಬಾಮ, ಹೃದಯ ವೈಶಾಲ್ಯತೆಯನ್ನು ಮೆರೆಯುವಲ್ಲಿ ಹಿಂದಿನ ಎಲ್ಲ ಅಧ್ಯಕ್ಷರಿಗಿಂತ ಭಿನ್ನವಾಗಿದ್ದಾರೆ. ಅದೆಂದರೆ ಚುನಾವಣೆಯಲ್ಲಿ ತಮಗೆ ಪ್ರಥಿಸ್ಪರ್ದಿಯಾಗಿದ್ದು ಚುನಾವಣಾ ಸಂದರ್ಭದಲ್ಲಿ ತಮ್ಮನ್ನು ಹೀನಾಯವಾಗಿ ಠೀಕಿಸುತ್ತಿದ್ದ ಶ್ರೀಮತಿ ಹಿಲ್ಲರಿ ಕ್ಲಿಂಟನ್ (ಹಿಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ರವರ ಪತ್ನಿ) ರವರನ್ನು ದೇಶದ ಅತ್ಯಂತ ಉನ್ನತ ಹುದ್ದೆಯಾದ ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೆಮಿಸಿರುವುದೇ ಅಲ್ಲದೆ ತಮ್ಮೊಡನೆ ಸ್ಪರ್ಧಿಸಿದ್ದ ಇನ್ನೋರ್ವ ಅಭ್ಯರ್ಥಿಯಾದ ಜೋ ಬೈಡೆನ್ ರವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿ ತಮ್ಮ ಔದಾರ್ಯವನ್ನು ಮೆರಿದಿದ್ದಾರೆ.

ಇದಲ್ಲದೇ ಚುನಾವಣೆಯಲ್ಲಿ ತಮ್ಮೊಡನೆ ಅಧ್ಯಕ್ಷಗಿರಿಗೆ ಹಣಾಹಣಿ ಸೆಣೆಸಿದ ರಿಪಬ್ಲಿಕನ್ ಅಭ್ಯರ್ಥಿ ಜಾನ ಮೆಕೆನ್ರನ್ನು, ತಾವು ಪದವಿಯನ್ನು ಅಲಂಕರಿಸುವ ಮುನ್ನಾದಿನ ವಿಶೇಷವಾಗಿ ಔತಣ ಕೂಟವನ್ನು ಏರ್ಪಡಿಸಿ ಮೆಕೆನ್ರವರ ಸಹಕಾರವನ್ನು ಕೋರಿ ಅವರನ್ನೂ ಸಹ ಸತ್ಕರಿಸಿದ್ದಾರೆ.

ಒಬಮಾರವರ ಹೃದಯವೈಶಾಲ್ಯತೆಗೆ ಇನ್ನೊಂದು ಉದಾಹರಣೆ ಎಂದರೆ ಕಳೆದ ೪೦ ವರ್ಷಗಳಿಂದ ಸೇವೆಸಲ್ಲಿಸಿ ನಿವೃತ್ತಿಯಾಗಿದ್ದ ರಾಷ್ಟ್ರದ ಅಧ್ಯಕ್ಷರಿಗೆಂದೇ ಪ್ರತ್ಯೇಕವಾಗಿ ನೇಮಿಸಲ್ಪಟ್ಟಿದ್ದ ೮೭ ವರ್ಷದ ಹಿರಿಯ ಬಾಣಸಿಗರೋರ್ವರನ್ನು ಗುರುತಿಸಿ ಆತನನ್ನು ಒಬಾಮರವರು ಪದವಿ ಅಲಂಕರಿಸುವ ಸಂದರ್ಭಕ್ಕೆ ಆಹ್ವಾನಿಸಿ ಅವರನ್ನು ಇತರ ಗಣ್ಯಾತಿ ಗಣ್ಯರ ಜೊತೆಯಲ್ಲಿ ಸತ್ಕರಿಸಿರುವುದು ವಿಶೇಷವೇ ಸರಿ.

ಮಂಗಳವಾರ, ಜನವರಿ 27, 2009

ಮುಂಜಾನೆಯಿಂದ ಸಂಜೆಯವರೆಗೆ...

ಇದು ನಾಲ್ಕು ಸಾಲುಗಳ ಕವನ. ಪ್ರತಿ ಸಾಲಿನಲ್ಲಿ ಎರಡನೇ ಅಕ್ಷರ ಒಂದೇ ಆಗಿರುತ್ತದೆ. ಬಾಳಿನ ಮುಂಜಾನೆ ಮತ್ತು ಸಂಜೆಯನ್ನು ಸೂಚಿಸುವ ಪ್ರಯತ್ನವನ್ನು ಮಾಡಿರುತ್ತೇನೆ. ನಿಮ್ಮ ಅನಿಸಿಕೆ ಅಭಿಪ್ರಾಯಕ್ಕೆ ಕಾದಿದ್ದೇನೆ.

೧||
ರಂಜಿಸಿತು ಮೂಡಲು ರಕ್ತವರ್ಣದಲಿ
ಅಂಜಿದವು ನಕ್ಷತ್ರ ರಾಶಿ ಬಾನಿನಲಿ
ಪಂಜಿನಂದದಿ ಭಾಸ್ಕರ ಮೇಲೇರೆ
ಮಂಜಿನಲಿ ಮುಸುಕಿಹ ಧರಣಿಯ ಮೈದೋರೆ

೨||
ಅಂದಿನಾ ಕರ್ಮಕ್ಕೆ ತಲೆಬಾಗಿ ನಿಂದು
ವಂದನೆಯನರ್ಪಿಸಿದ ಬ್ರಾಹ್ಮಣ ಮಿಂದು
ಕಂದೀಲನುರಿಸಿದ ಪಾದ್ರಿ ಚರ್ಚಿನೊಳು
ಎಂದನಾ ಮಹಮದೀಯ ಆಲ್ಲಾಹೊ ಅಕ್ಬರ್

೩||
ರವಿ ಮೆಲ್ಲ ಮೆಲ್ಲ ಮೇಲೆರುತಿದ್ದ ಸುಡುತೆ
ಕವಿ ಕುಳಿತಿರ್ದ ಮರದಡಿ ಈಕ್ಷಿಸುತೆ
ಕಾವಿಯುಟ್ಟ ಸನ್ಯಾಸಿ ತಿರುಗುತಲಿದ್ದ ಬೀದಿಯಲಿ
ಆವರಿಸಿತು ಮಾಯೆ ಜಗದ ಜನರಲಿ

೪||
ಕತ್ತೆತ್ತಿ ನೋಡೆ ಕಂಡಿತು ಕಲ್ಯಾಣ ನಗರಿ
ಎತ್ತೆತ್ತ ನೋಡಿದರು ತೋಟಗಳ ವೈಖರಿ
ಹೊತ್ತಿದ್ದವು ರೈಲುಬಂಡಿ ಮೋಟರು ಜನರ
ಎತ್ತಲೋ ಒಯ್ಯುವ ಅರ್ಥವಿಲ್ಲದ ಸಡಗರ

೫||
ತೆರೆದರು ವರ್ತಕರು ಮುಚ್ಚಿದಂಗಡಿಗಳ
ನೆರೆದರು ಜನರು ಮುಂದಿಟ್ಟಡಿಗಳ
ಆರಂಭಿಸಿತು ಜಗ ತನ್ನ ಇಹಲೋಕ ವ್ಯಾಪಾರ
ಮರೆತು ಸಂಪೂರ್ಣ ಪರಲೋಕ ವಿಚಾರ

೬||
ಓಡುತಲಿತ್ತು ಕಾಲ ನೋಡಲು ಸಾಯಂಕಾಲ
ಮಾಡುತಲಿತ್ತು ಜಗ ತನ್ನ ಕರ್ಮದ ಪಾಲ
ನೋಡುತಲಿದ್ದನು ಕಾಲನು ಕಾಲವ ತನ್ನೊಳು
ಬಾಡುತಲಿದ್ದ ಮನುಜನ ತನ್ನೆಡೆಗಳೆಯಲು

ಹೆತ್ತಳಾ ತಾಯಿ ೫ ಮಕ್ಕಳ

ಅಮೆರಿಕೆಯ ಪ್ರಿನ್ಸ್ ಜಾರ್ಜ್ ಕೌಂಟಿ ಯಂಬಲ್ಲಿ ಕರಿಯ ಜನಾಂಗಕ್ಕೆ ಸೇರಿದ ಇಪ್ಪತ್ತೇಳು ವರ್ಷದ ಮಹಿಳೆಯೊಬ್ಬಳು ನಾಲ್ಕು ಹೆಣ್ಣುಮಕ್ಕಳೂ ಸೇರಿ ಒಂದು ಗಂಡು ಮಗುವಿನ ಸಮೇತ ಐದು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಎಲ್ಲ ಮಕ್ಕಳು ಆರೋಗ್ಯವಾಗಿದ್ದು ಅವುಗಳಿಗೆ ಸ್ತನ್ಯಪಾನ ಮಾಡಿಸುವಲ್ಲಿ ಆಕೆ ಸುಸ್ತಾಗಿಬಿಡುತ್ತಾಳೆ. ಪ್ರತಿ ೪೦ ನಿಮಿಷಕ್ಕೊಮ್ಮೆ ಸರದಿಯಂತೆ ಹಾಲು ಉಣ್ಣಿಸಲು ಈಕೆ ಮುಂಜಾನೆ ೩ ಗಂಟೆಯಿಂದಲೇ ಪ್ರಾರಂಭಿಸಿ ಈಕೆಗೆ ವಿಶ್ರಾಂತಿ ಎಂಬುದೇ ಇಲ್ಲವಾಗಿ ಬಹಳಷ್ಟು ಪ್ರಾಯಾಸ ಪಡಬೇಕಾಗಿದೆ. ಈಕೆಯ ತಾಯಿ ಕೃತಕ ಹಾಲಿನ ಡಬ್ಬ ತಂದು ಮಕ್ಕಳಿಗೆ ಕುಡಿಸುವಾಗ ಈಕೆಗೆ ಊಟ ಮಾಡಿ ನಿದ್ರೆ ಮಾಡಲು ಅವಕಾಶವಾಗುತ್ತದೆ.

ಈ ಮಕ್ಕಳಿಗೆ ಪ್ರತಿದಿನ ಕನಿಷ್ಠ ನಲವತ್ತು ಡೈಪೆರ (ಶೌಚ ಸಾದನ) ಬೇಕಾಗಿ, ಇದೇ ಅಲ್ಲದೆ ಮಕ್ಕಳ ತಾಯಿಯ ಪೌಷ್ಟಿಕ ಆಹಾರ ಕೊರತೆ, ವೈದ್ಯಕೀಯ ಸೇವೆಗೆ ತಗಲುವ ವೆಚ್ಹ, ಶಿಶುಗಳಿಗೆ ಬಟ್ಟೆ, ಹಾಸಿಗೆ ಹೊದಿಕೆ, ಇನ್ನಿತರ ಅಗತ್ಯಗಳಿಗೆ ಹಣ ಸಾಲದೆ ಈಕೆ ಬಹಳಷ್ಟು ಕಷ್ಟ ಅನುಭವಿಸುತಿದ್ದಾಳೆ. ಈಕೆಯ ಗಂಡ ಸೂಡಾನ್ ಎಂಬಲ್ಲಿ ಮಿಲಿಟರಿ ಯೋಧನಾಗಿದ್ದು ಬರುವ ಸಂಬಳ ಕಡಿಮೆಯಿದ್ದು ಸಂಸಾರ ತೂಗಿಸುವುದು ಕಷ್ಟವಾಗಿರುವುದೇ ಅಲ್ಲದೆ ಈತ ಅಮೆರಿಕೆಗೆ ಬಂದು ಮಕ್ಕಳನ್ನು ನೋಡಲು ಆಗದಷ್ಟು ಕರ್ತವ್ಯನಿರತನಾಗಿದ್ದು ಕೇವಲ ಮಕ್ಕಳ ಫೋಟೋಗಳನ್ನು ನೋಡಿಕೊಂಡು ತೃಪ್ತಿ ಪಡಬೇಕಾಗಿದೆ.

ಈಕೆಗೆ ವಿಮೆಯ ಸಹಾಯವೂ ದೊರಕಿಲ್ಲ. ಕಾರಣ ಈಕೆ ವಿದೇಶೀಯ ಪ್ರಜೆಯಾಗಿದ್ದು ವಿಮೆಯ ಕಾನೂನು ತೊಡುಕುಗಳು ಈಕೆಗೆ ವಿಮೆಯ ಸೌಲಭ್ಯ ದೊರಕಲು ಅನಾನುಕೂಲವಾಗಿದೆ. ಈಕೆಯ ನೆರಹೊರೆಯವರು ಸಹಾಯ ಮಾಡುತಿದ್ದು ಆಕೆ ಎಲ್ಲರಿಗು ಬಹಳಷ್ಟು ಚಿರರುಣಿಯಾಗಿದ್ದಾಳೆ. ಇಂತಹ ಕಷ್ಟ ಪರಿಸ್ಥಿತಿಯಲ್ಲೂ ಸಹ ಆಕೆ ಈ ಮಕ್ಕಳು ತನಗೆ ದೇವರು ಕೊಟ್ಟ ವರ ಎಂದು ಹೆಮ್ಮೆಯಿಂದ ಹೇಳುತ್ತಾಳೆ.

ಸೋಮವಾರ, ಜನವರಿ 5, 2009

ಬೆಂಗಳೂರು ಮಹಾನಗರಪಾಲಿಕೆಯ ತೆರಿಗೆ ನೀತಿ

ಬೆಂಗಳೂರು ಮಹಾನಗರಪಾಲಿಕೆಯ ಗೊಂದಲದ ನೂತನ ತೆರಿಗೆ ನೀತಿ ಪರಿಹಾರಕ್ಕೆ ಮಾಜಿ ಮಹಾ ಪೌರ ಶ್ರೀ ರಮೇಶ್ ರವರ ಅನುಭವ ಹಾಗು ಅನಿಸಿಕೆ ಇಂದಿನ ಗೊಂದಲಕ್ಕೆ ಸೂಕ್ತ ಪರಿಹಾರ. ಮಹಾಪೌರರಾಗಿ ರಮೇಶ್ ರವರು ಬೆಂಗಳೂರು ಜನತೆಯ ನಾಡಿಮಿಡಿತವನ್ನು ಚನ್ನಾಗಿ ಬಲ್ಲವರು. ಬೆಂಗಳೂರು ಮಹಾನಗರ ಈಗ ಬೃಹದಾಕಾರವಾಗಿ ಬೆಳದು ಜಗತ್ತಿನ ಬಹು ದೊಡ್ಡ ವಾಣಿಜ್ಯ ನಗರಿಯೂ ಆಗಿ ಪ್ರಪಂಚದಾದ್ಯಂತ ಎಲ್ಲರ ಗಮನವನ್ನು ಸೆಳೆಯುತ್ತಿದೆ. ನಗರ ಮಹಾಪಾಲಿಕೆ ಈ ವಾಣಿಜ್ಯ ವರ್ಗದಿಂದ ಬಹುಪಾಲು ತೆರಿಗೆಯನ್ನು ಪಡೆಯುವಲ್ಲಿ ಪ್ರಯತ್ನಿಸುವುದು ಸೂಕ್ತವೆನ್ನಿಸುತ್ತದೆ. ನಗರ ನಿವಾಸಿಗಳ ಆಸ್ತಿ ತೆರಿಗೆಯ ವಿಷಯದಲ್ಲಿ ರಮೇಶ್ ರಂತಹವರ ಮಾರ್ಗದರ್ಶನ ನಿಜಕ್ಕೂ ಪಾಲಿಕೆಗೆ ಒಂದು ದಿಕ್ಸೂಚಿ ಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸರಕಾರ ಈ ಬಗ್ಗೆ ಪಕ್ಷ ಭೇದ ಮರೆತು ಚಿಂತಿಸಬೇಕಾಗಿದೆ. ಪಾಲಿಕೆಯ ನಿರಂತರ ಆದಾಯದ ಬಗ್ಗೆ ರಾಜ್ಯದ ಹಣಕಾಸಿನ ಮತ್ರಿಯೂ ಆಗಿರುವ ಮುಖ್ಯ ಮಂತ್ರಿ ಯಡಿಯೂರಪ್ಪನವರು ಚಿಂತುಸುವರೆ?